ಸಿಂಡ್ರೆಲಾಳ ರಾಜಕುಮಾರ

ಆಗಿನ್ನೂ ಬಾಲ್ಯದ ಹೊಸ್ತಿಲು ದಾಟಿರಲಿಲ್ಲ.ಎಂದೋ ಓದಿದ್ದ ಸಿಂಡ್ರೆಲಾಳ ಕತೆ, ಸಿನಿಮಾದ ಯಾವುದೋ ಹಾಡಿನಲ್ಲಿ ಮತ್ತೆ ಕಣ್ಣೆದುರು ಬಂದಿತ್ತು. ಮೊದಲಿನಿಂದಲೂ ಸಿಂಡ್ರೆಲಾಳ ಕತೆಯೆಂದರೆ ನನ್ನೊಳಗೆ ಕೌತುಕವೇ. ಸಿಂಡ್ರೆಲಾಳ ರಾಜಕುಮಾರನಂತವನು ಈಗಲೂ ಇರಬಹುದಾ? ಹೀಗೆ ಕುದುರೆಯ ಸಾರೋಟು ಏರಿ ಸಿಂಡ್ರೆಲಾಳಿಗಾಗಿ ಹುಡುಕಾಡಿ ಬರಬಹುದಾ? ಎನ್ನುವ ಕುತೂಹಲಗಳೊಂದಿಗೆ ಬಾಲ್ಯದಿಂದಾಚೆ ಬಂದಿದ್ದೆ. ಆ ರಾಜಕುಮಾರನಂತವನ ಹುಡುಕು ಕಂಗಳ ಹುಡುಕಾಟದಲ್ಲೇ, ನಾನೂ ಸಿಂಡ್ರೆಲಾಳಾಗಬಾರದೇ ಎನ್ನುವ ಆಸೆ ಆಗಾಗ ಮನ ಸವರಿದ್ದೂ ಇದೆ. ಛೇ ಇಲ್ಲ ಆ ಕತೆಯ ಸಿಂಡ್ರೆಲಾಳಿಗೆ ಏನೇನೂ ಇರಲಿಲ್ಲ, ನನಗೋ ಎಲ್ಲವೂ ಇದೆ, ನಾ ಹೇಗೆ ಸಿಂಡ್ರೆಲಾ ಆಗಲು ಸಾಧ್ಯ ಎಂದುಕೊಳ್ಳುವಷ್ಟರಲ್ಲೇ ದಿನಗಳುರುಳಿ ಇರುಳು ಸರಿದು ಬೆಳಕು ಹರಿದಿತ್ತು. ಇದ್ದಕ್ಕಿದ್ದಂತೆ ನನ್ನ ಸೊಬಗಿನ ಪ್ರಪಂಚ ತಣ್ಣಗೆ ಸದ್ದಿಲ್ಲದಂತೆ ಕುರುಹೂ ಉಳಿಸದೆ ಕರಗಿಹೋಗಿತ್ತು. ಥೇಟ್ ನಾನೀಗ ಸಿಂಡ್ರೆಲಾಳೇ ಆಗಿದ್ದೆ. ಕಥೆಯೊಳಗಿನ ಕಿನ್ನರಿ ಈಗ ಎದುರುಬಂದು ನನಗೂ ಮಾಯಾದಂಡ ಕೊಟ್ಟಿದ್ದರೇ? ಕಥೆಯ ರಾಜಕುಮಾರ ವಾಸ್ತವದಲ್ಲಿ ಒಂಟಿಪಾದುಕೆ ಹಿಡಿದು ಸಾರೋಟಿನಲ್ಲಿ ಎದುರು ಬಂದು ನಿಂತರೇ? ಕೆಲವೊಂದು ಕಲ್ಪನೆಗಳು ನಗಿಸಿಬಿಡುತ್ತವೆ, ನಾನೂ ನಕ್ಕಿದ್ದೆ. ಕೆಲವೊಮ್ಮೆ ಮನದ ಬಯಕೆಗಳಿಗೆ ದೇವತೆಗಳು ಅಸ್ತು ಅಸ್ತು ಎನ್ನುವರು ಎಂಬ ಮಾತು ತುಂಬಾ ಸಲ ಕೇಳಿದ್ದಿದೆ. ಇಲ್ಲಿಯೂ ನನ್ನ ಮನದ ಮಾತು ನಾ ನೋಡದ ಕಿನ್ನರಿಗೆ ಕೇಳಿಸಿ ಅಸ್ತು ಎಂದುಬಿಟ್ಟಳಾ! ಇರಬಹುದೇನೋ. ಕಥೆಯೊಳಗಿನ ಸಿಂಡ್ರೆಲಾಳ ರಾಜಕುಮಾರನಂತವನೇ ಅಂದು ಎದುರು ಕೂತಿದ್ದ, ಅದೇ ಹುಡುಕು ಕಂಗಳು, ಎಲ್ಲೆಲ್ಲೋ ಸುತ್ತಿ ಕೊನೆಗೆ ನನ್ನಲ್ಲೇ ಸ್ಥಿರವಾಗಿ ನಿಂತಿತ್ತು. ಒಂಟಿ ಪಾದುಕೆಗೆ ಜೊತೆ ಸಿಕ್ಕ ಖುಷಿ. ಅವನ ಹುಡುಕಾಟದ ಸಿಂಡ್ರೆಲಾ ಬಹುಶಃ ನಾನೇ ಆಗಿದ್ದೆನೇನೋ, ಕಥೆಯೊಳಗಿನ ರಾಜಕುಮಾರನಂತೆ ಇವನೂ ಹುಡುಕಾಟಕ್ಕೆ ವಿರಾಮವಿಟ್ಟುಬಿಟ್ಟಿದ್ದ. ಕರಗಿಹೋಗಿದ್ದ ನನ್ನ ಸೊಬಗಿನ ಪ್ರಪಂಚ ಮತ್ತೆ ಅರಳತೊಡಗಿತು. ಸಿಂಡ್ರೆಲಾಳ ರಾಜಕುಮಾರ ಹೇಗಿದ್ದಿರಬಹುದು ಎನ್ನುವ ಕುತೂಹಲ ಮರೆಯಾಗಿತ್ತು, ನನ್ನ ಹುಡುಕಾಟದ ರಾಜಕುಮಾರನಂತು ಇವನೇ ಆಗಿದ್ದ, ಬದುಕ ಸೇರಿದ್ದ.

Comments

Popular posts from this blog